ಧನ ನಂದ
 		ಗ್ರೀಕ್ ಚಕ್ರವರ್ತಿ ಅಲೆಗ್ಸಾಂಡರ್ ಭಾರತದ ದಂಡಯಾತ್ರೆ ಮಾಡಿದ ಸಮಯದಲ್ಲಿ (ಕ್ರಿ.ಪೂ.327---325) ಮಗಧ ರಾಜ್ಯವನ್ನು ಆಳುತ್ತಿದ್ದ ನಂದ ವಂಶದ ದೊರೆ. ಇವನು ಈ ವಂಶದ ಕೊನೆಯ ದೊರೆಯೆಂದು ಪುರಾಣಗಳಿಂದಲೂ ಬೌದ್ಧರ ಮಹಾಬೋಧಿವಂಶವೆಂಬ ಗ್ರಂಥದಿಂದಲೂ ತಿಳಿದುಬರುತ್ತದೆ. ಪುರಾಣಗಳಲ್ಲಿ ಇವನ ಹೆಸರಿನ ಉಲ್ಲೇಖವಿಲ್ಲ. ಗ್ರೀಕ್ ಲೇಖಕರು ಇವನ ಬಗ್ಗೆ ಕೆಲವು ವಿವರಗಳನ್ನು ನೀಡಿದ್ದಾರೆ. ಅಗ್ರಾಮ್ಸ್ ಅಥವಾ ಕ್ಸಾಂಡ್ರೇಮ್ಸ್ ಎಂದು ಇವನನ್ನು ಹೆಸರಿಸಲಾಗಿದೆ. ಗ್ರೀಕ್ ಲೇಖಕರು ಹೇಳುವಂತೆ ಇವನ ಸೇನೆಯಲ್ಲಿ 20,000 ಕುದುರೆಗಳು, 2,00,000 ಕಾಲ್ದಳ, 3,000 ಆನೆಗಳು, ಮತ್ತು ನಾಲ್ಕು ಕುದುರೆಗಳಿಂದ  ಎಳೆಯಲ್ಪಟ್ಟ 2,000 ರಥಗಳು ಇದ್ದುವು. ಇವನ ಚಕ್ರಾಧಿಪತ್ಯ ಪಂಜಾಬಿನ ಎಲ್ಲೆಯವರೆಗೂ ಹಬ್ಬಿತ್ತೆಂದು ಊಹಿಸಲಾಗಿದೆ.  ಇವನ ರಾಜಧಾನಿ ಪಾಟಲಿಪುತ್ರ. ಇವನು ಬಲಿಷ್ಠನಾಗಿದ್ದರೂ  ಪ್ರಜೆಗಳ ಪ್ರೀತಿ ಗಳಿಸಿಕೊಂಡಿರಲಿಲ್ಲ. ಇವನು ನೀಚನೂ ಹೀನಕುಲಜನೂ ಆಗಿ ಜನರ ದ್ವೇಷ ಸಂಪಾದಿಸಿಕೊಂಡಿದ್ದಾನೆಂದು, ಆದ್ದರಿಂದ ಇವನನ್ನು ಸುಲಭವಾಗಿ ಗೆಲ್ಲಬಹುದೆಂದು ಚಂದ್ರಗುಪ್ತ ಮೌರ್ಯ ಅಲೆಗ್ಸಾಂಡರನ ಅನುಯಾಯಿಗಳಿಗೆ ಹೇಳಿದ್ದ. ಇವನು ಮಹಾಜಿಪುಣ;  ಜನರ ಮೇಲೆ ವಿಪರೀತ ತೆರಿಗೆ ವಿಧಿಸಿ ಅವರ ಸುಲಿಗೆ ಮಾಡಿ ಹಣ ಸಂಗ್ರಹಿಸಿದ್ದ; ಗಂಗಾನದಿಯ ಪಾತ್ರದಲ್ಲಿ ಗುಹೆಯೊಳಗೆ ಅಗಾಧ ಹಣವನ್ನು ಬಚ್ಚಿಟ್ಟಿದ್ದ - ಎಂದು ಹೇಳಲಾಗಿದೆ.  ಆದ್ದರಿಂದಲೇ ಇವನಿಗೆ ಧನ ನಂದ ಎಂಬ ಅಡ್ಡ ಹೆಸರು ಬಂತೆನ್ನಲಾಗಿದೆ. ಈ ಸ್ಥಿತಿಯನ್ನರಿತ ಅಲೆಗ್ಸಾಂಡರ್ ಮಗಧ ರಾಜ್ಯದ ಮೇಲೆ ದಂಡೆತ್ತಿ ಹೋಗಲು ಯೋಚಿಸಿದ್ದನೆಂದು ಕೆಲವು ಮೂಲಗಳು ತಿಳಿಸುತ್ತವೆ. ಅದರೆ ಇವನ ಸೈನ್ಯದ ಬಲಕ್ಕೆ ಹೆದರಿ ಅಲೆಗ್ಸಾಂಡರನ ಸೈನಿಕರು ಭಾರತದ ದಂಡಯಾತ್ರೆಯನ್ನು ಮುಂದುವರಿಸಲೊಲ್ಲದೆ ಹೋದರೆಂದು ಪ್ರತೀತಿ.  ಚಂದ್ರಗುಪ್ತ ಮೌರ್ಯ ಪ್ರಬಲನಾಗಿ ಧನ ನಂದನನ್ನು ವಧಿಸಿ ಮಗಧ ರಾಜ್ಯವನ್ನು ಸ್ವಾಧೀನಪಡಿಸಿಕೊಂಡ.
(ಎಂ.ಎನ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ